ಕೂಪರ್, ಜೇಮ್ಸ್ ಫೆನಿಮೋರ್
1789-1851. ಅಮೆರಿಕದ ಕಾದಂಬರಿಕಾರ, ಇತಿಹಾಸಜ್ಞ, ಲೋಕಪ್ರಸಿದ್ಧಿಯನ್ನು ಗಳಿಸಿದ ಅಮೆರಿಕನರಲ್ಲಿ ಮೊದಲಿಗ. ನ್ಯೂ ಜೆರ್ಸಿಯ ಬರ್ಲಿಂಗ್‍ಟನ್‍ನಲ್ಲಿ ತನ್ನ ತಂದೆಯ ಹನ್ನೆರಡನೆಯ ಮಗುವಾಗಿ ಹುಟ್ಟಿದ. ಈತನ ತಂದೆ ನ್ಯಾಯಾಧೀಶ ಹಾಗೂ ನ್ಯೂಯಾರ್ಕಿನ ಶಾಸನಸಭೆಯ ಸದಸ್ಯ. ಕೂಪರ್ ಹುಟ್ಟಿದ ಮೇಲೆ ಇಡೀ ಕುಟುಂಬವೇ ಓಟೆಸ್ಕೋ ಸರೋವರದ ದುರ್ಗಮ ಪ್ರದೇಶದ ಕಡೆಗೆ ಹೊರಟು ಅಲ್ಲಿಯ ಪ್ರದೇಶವನ್ನು ವ್ಯವಸಾಯ  ಯೋಗ್ಯವನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿತು. ಅನಂತರ ಅದೇ ಪ್ರದೇಶ ಕೂಪರ್ಸ್ ಟೌನ್ ಎಂದು ಹೆಸರು ಪಡೆಯಿತು. ಕೂಪರನ ವಿದ್ಯಾಭ್ಯಾಸ ಯೇಲ್‍ವಿವಿ.ನಲ್ಲಿ ನಡೆಯಿತು. ಮೊದಲಿಗೆ ಐದು ವರ್ಷ ನೌಕಾದಳದಲ್ಲಿದ್ದು ಅದನ್ನು ಬಿಟ್ಟ ಮೇಲೆ ಈತ ಸಾಹಿತ್ಯರಚನೆ ಕೈಗೊಂಡ. 1811 ರಲ್ಲಿ ಸುಸಾನ್ ಅಗುಸ್ಟಾಡ ಲ್ಯಾನ್ಸಿ ಎಂಬಾಕೆಯನ್ನು ಮದುವೆಯಾಗಿ ಕೂಪರ್ಸ್ ಟೌನ್‍ನಲ್ಲಿ ನೆಲಸಿದ. ತನ್ನ ಸಂಸಾರದ ಅಭಿವೃದ್ಧಿಯ ಕಡೆ ಗಮನ ನೀಡಿ ವ್ಯವಸಾಯದ ಜೊತೆ ರಾಜಕೀಯ, ಆರ್ಥಿಕ, ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ತೋರತೊಡಗಿದ. 1820 ರಲ್ಲಿ ಪ್ರಿಕಾಷನ್ ಎಂಬ ಪ್ರಥಮ ಕಾದಂಬರಿಯನ್ನು ಪ್ರಕಟಿಸಿದ. ಮರುವರ್ಷ, ಅಮೆರಿಕವನ್ನು ಹಿನ್ನೆಲೆಯಾಗಿಟ್ಟುಕೊಂಡು ದಿ ಸೈ ಎಂಬ ಕಾದಂಬರಿ ಬರೆದು ಪ್ರಖ್ಯಾತನಾದ. ಈತನ ದಿ ಪಯನೀರ್ಸ್ (1823) ಎಂಬ ಗ್ರಂಥದಲ್ಲಿ ಗಡಿನಾಡಿನ ಜನರ ಸಾಹಸ ಕಥೆಗಳಿವೆ. ಈ ಕೃತಿಗೆ ದೊರೆತ ಮನ್ನಣೆ ದಿ ಲಾಸ್ಟ್ ದಿ ಅಫ್ ಮೋಹಿಕನ್ಸ್ (1826), ದಿ ಪ್ರಯರಿ(1827), ದಿ ಪಾತ್ ಫೈಂಡರ್ (1840), ದಿ ಡೀರ್ ಸ್ಲೇಯರ್ (1841) ಮೊದಲಾದ ಅಂಥದೇ ವಸ್ತುಗಳನ್ನು ಒಳಗೊಂಡ ಕೃತಿಗಳು ಹೊರಬರಲು ಕಾರಣವಾಯಿತು. ದಿ ಪೈಲಟ್(1823), ದಿ ರೆಡ್ ರೋವರ್(1828) ಮತ್ತು ದಿ ವಾಟರ್ ವಿಚ್ ಮೊದಲಾದ ಕಾದಂಬರಿಗಳು ನಾವಿಕರ ಪ್ರಣಯ ಜೀವನವನ್ನು ಕುರಿತಂಥವು. ಕೂಪರನ ಒಲವು ಮೊದಲು ಪ್ರಜಾಪ್ರಭುತ್ವದ ಕಡೆಯಿದ್ದರೂ ಯೂರೋಪಿನಿಂದ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ಅಮೆರಿಕದ ಪ್ರಜಾಪ್ರಭುತ್ವದ ಓರೆಕೋರೆಗಳನ್ನು ತನ್ನ ಕೃತಿಗಳಲ್ಲಿ ಚರ್ಚಿಸಿ ಕಟುವಾಗಿ ಟೀಕಿಸಿದ. ಈತ ಬರೆದ ಚಾರಿತ್ರಿಕ ಗ್ರಂಥಗಳಲ್ಲಿ ಹಿಸ್ಟರಿ ಆಫ್ ದಿ ನೇವಿ(1839) ವಿವಾದಾಸ್ಪದವಾದುದಾದರೂ ಶ್ರೇಷ್ಠವರ್ಗದ ಗ್ರಂಥ. ಕಡೆಯ ದಿನಗಳಲ್ಲಿ ಈತ ತನ್ನ ಕೃತಿಗಳು. ವ್ಯಕ್ತಿತ್ವ, ಚಾರಿತ್ರ್ಯಗಳ ಬಗ್ಗೆ ನಿಂದಿಸಿದ ವ್ಯಕ್ತಿ ಹಾಗೂ ಪತ್ರಿಕೆಗಳ ಮೇಲೆ ಮೊಕದ್ದಮೆ ನಡೆಸಿ ಮನಶ್ಯಾಂತಿಯನ್ನು ಕಳೆದುಕೊಂಡ. 1895-1900ರಲ್ಲಿ ಈತನ ಎಲ್ಲ ಬರೆಹವನ್ನೂ ಒಟ್ಟುಗೂಡಿಸಿ 33 ಸಂಪುಟಗಳಲ್ಲಿ ಪ್ರಕಟಿಸಲಾಯಿತು. 1922ರಲ್ಲಿ ಈತನ ಮೊಮ್ಮಗ ಈತನ ಪತ್ರ ವ್ಯವಹಾರಗಳನ್ನು ಸಂಪಾದಿಸಿ ಪ್ರಕಟಿಸಿದ.									      (ಎನ್.ಎಸ್.ಎಲ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ